
19th December 2024
ಅಂಬೇಡ್ಕರ ಅವರ ಹೆಸರು ತುಳಿತಕ್ಕೊಳಗಾದವರ ಸ್ಫೂರ್ತಿ,ಬಲ : ಮುಕ್ಕಣ್ಣ ಕರಿಗಾರ
ಮುಕ್ಕಣ್ಣ ಕರಿಗಾರ
ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಮಾತನಾಡುತ್ತ ಡಾ.ಬಿ.ಆರ್.ಅಂಬೇಡ್ಕರ ಅವರ ಬಗ್ಗೆ ಅಗೌರವದ,ಅನಪೇಕ್ಷಣೀಯ ಮಾತುಗಳನ್ನಾಡಿದ್ದಾರೆ' ಅಂಬೇಡ್ಕರ, ಅಂಬೇಡ್ಕರ್, ಅಂಬೇಡ್ಕರ್,ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದು ಈಗ ಕೆಲವರಿಗೆ ಶೋಕಿಯಾಗಿದೆ. ಇಷ್ಟೇ ದೇವರನ್ನು ಸ್ಮರಿಸಿದರೆ ಏಳು ತಲೆಮಾರುಗಳವರೆಗೆ ಸ್ವರ್ಗದಲ್ಲಿರುತ್ತಿದ್ದರು' ಎನ್ನುವ ಮಾತುಗಳನ್ನಾಡಿದ್ದಾರೆ. ಅಮಿತ್ ಶಾ ಅವರು ಈ ಮಾತುಗಳನ್ನಾಡುವ ಅಗತ್ಯವಾದರೂ ಏನಿತ್ತು ಆ ಸಂದರ್ಭದಲ್ಲಿ ? ಡಾ.ಬಿ.ಆರ್.ಅಂಬೇಡ್ಕರ ಅವರ ಬಗ್ಗೆ ತಮಗಿದ್ದ ಅಸಹನೆಯನ್ನು ಹೊರಹಾಕಿದ್ದಾರೆ ಅಮಿತ್ ಶಾ ಎನ್ನದೆ ವಿಧಿಯಿಲ್ಲ.ಅಂಬೇಡ್ಕರ ಅವರು ಬರೆದ ಸಂವಿಧಾನದ ಆಧಾರದ ಮೇಲೆಯೇ ಕೇಂದ್ರಗೃಹಮಂತ್ರಿಗಳಾಗಿರುವ ಅಮಿತ್ ಶಾ ಅವರಲ್ಲಿ ಅಂಬೇಡ್ಕರ ಅವರ ಬಗ್ಗೆ ಗೌರವದ ಭಾವನೆ ಇರಬೇಕೇ ಹೊರತು ಅಸಹನೆ ಇರಬಾರದು.
ಅಮಿತ್ ಶಾ ಅವರು ದೇಶದ ಗೃಹಮಂತ್ರಿಗಳು,ಪ್ರಧಾನಮಂತ್ರಿ ನರೇಂದ್ರಮೋದಿಯವರ ನಂತರದ ಅತ್ಯುನ್ನುತ ಹುದ್ದೆಯಲ್ಲಿರುವವರು.ಕೇಂದ್ರ ಗೃಹಸಚಿವರಾಗಿ ಸಂವಿಧಾನದ ವಿಧಿ ನಿಯಮಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕಾದ ಸಾಂವಿಧಾನಿಕ ಹುದ್ದೆಯಲ್ಲಿರುವವರು. ಸಂವಿಧಾನದಂತೆ ನಡೆದುಕೊಳ್ಳಬೇಕಾದವರು ಸಂವಿಧಾನದ ಕರ್ತೃ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಗೌರವಿಸುವುದಿಲ್ಲ ಎಂದರೆ ಏನರ್ಥ ?
ಅಂಬೇಡ್ಕರ ಅವರ ಹೆಸರನ್ನು ಜನರು ಸ್ಮರಿಸುತ್ತಿರುವುದನ್ನು ಸಹಿಸಲಾಗುತ್ತಿಲ್ಲ ಅಮಿತ್ ಶಾ ಅವರಿಗೆ ಅಂಬೇಡ್ಕರ ಅವರನ್ನು ಸ್ಮರಿಸುವ ಬದಲು ದೇವರನ್ನು ಸ್ಮರಿಸಲು ಉಪದೇಶಿಸುತ್ತಿರುವ ಕೇಂದ್ರಗೃಹಮಂತ್ರಿಗಳು ದೇವರನಾಮಸ್ಮರಣೆ ಮಾಡಿದರೆ ಏಳು ತಲೆಮಾರುಗಳವರೆಗೆ ಸ್ವರ್ಗಪ್ರಾಪ್ತಿಯಾಗುತ್ತಿತ್ತು ಎನ್ನುವ ಪುಕ್ಕಟೆ ಆಶ್ವಾಸನೆಯನ್ನು ಬೇರೆ ಕೊಟ್ಟಿದ್ದಾರೆ.ದೇಶದ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಅಮಿತ್ ಶಾ ಅವರು ಪ್ರಜೆಗಳಿಗೆ ಕಾಲ್ಪನಿಕ ಸ್ವರ್ಗ ನರಕಗಳ ಭೀತಿ ಪ್ರೀತಿಗಳನ್ನುಂ ಮಾಡುವ ಧರ್ಮೋಪದೇಶಕರಂತೆ ಮಾತನಾಡಿದ್ದಾರೆ.ಅಂಬೇಡ್ಕರ ಅಂಬೇಡ್ಕರ ಎನ್ನುವ ಬದಲು ದೇವರನ್ನು ಸ್ಮರಿಸಿದರೆ ಏಳು ತಲೆಮಾರುಗಳವರೆಗೆ ಸ್ವರ್ಗಪ್ರಾಪ್ತಿಯಾಗುತ್ತಿತ್ತು ಎನ್ನುವ ಅಮಿತ್ ಶಾ ಅವರು ಸ್ವರ್ಗವನ್ನೇನಾದರೂ ಕಂಡಿದ್ದಾರೆಯೆ? ಸ್ವರ್ಗ ಇರುವುದನ್ನು ಖಚಿತಪಡಿಸಬಲ್ಲರೆ? ದೇಶದ ಗೃಹಮಂತ್ರಿಗಳಾಗಿ ಸಂವಿಧಾನದ ಆಶಯದಂತೆ ಪ್ರಜೆಗಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸಬೇಕಾದ ಅಮಿತ್ ಶಾ ಅವರು ದೇಶವಾಸಿಗಳಲ್ಲಿ ಕಾಲ್ಪನಿಕ ಸ್ವರ್ಗ ನರಕಗಳ ಭಯಬಿತ್ತುತ್ತಿರುವುದು ವಿಷಾದದ ಸಂಗತಿ.ಸ್ವರ್ಗ ಸಿಗುತ್ತದೆಯೋ ಇಲ್ಲವೋ ಅದು ಮುಖ್ಯವಲ್ಲ ಅಮಿತ್ ಶಾ ಅವರಿಗೆ,ಅಂಬೇಡ್ಕರ್ ಅವರ ಹೆಸರನ್ನು ಜನತೆಸ್ಮರಿಸಬಾರದು ಎನ್ನುವುದಷ್ಟೇ ಮಹತ್ವದ್ದು ಅವರಿಗೆ.ಹಾಗಾಗಿ ಅಂಬೇಡ್ಕರ ಹೆಸರನ್ನು ಸ್ಮರಿಸದವರಿಗೆ ಸ್ವರ್ಗದ ಆಮಿಷ ತೋರಿಸಿದ್ದಾರೆ.
ಮನುವಾದಿಗಳು ಸ್ವರ್ಗ ನರಕಗಳ ಭಯದ ಬೀಜಗಳನ್ನು ಬಿತ್ತುತ್ತಲೇ ಭಾರತೀಯ ಸಮಾಜವನ್ನು ತಮ್ಮ ಕಬಂಧಬಾಹುಗಳಲ್ಲಿ ಹಿಡಿದಿಟ್ಟುಕೊಂಡಿದ್ದಾರೆ.ಶೃತಿ,ಸ್ಕೃತಿಗಳಾಗಲಿ,ಭಗವದ್ಗೀತೆ,ರಾ ಮಾಯಣ ಮಹಾಭಾರತಗಳಾಗಲಿ ನೀಡದ ಬದುಕುವ ಭರವಸೆ,ಘನತೆಯಿಂದ ಬದುಕುವ ಆಶ್ವಾಸನೆಯನ್ನು ಸಂವಿಧಾನವು ದೇಶದ ಶೂದ್ರರು,ದಲಿತರು,ಪದದುಳಿತರು,ಮಹಿಳೆಯರಿಗೆ ನೀಡಿದೆ.ಜನತೆಯ ಘನತೆಯಿಂದ ಬದುಕುವ ಹಕ್ಕನ್ನು ಗೌರವಿಸದವರು ಡಾ.ಬಿ.ಆರ್.ಅಂಬೇಡ್ಕರ ಅವರನ್ನು ವಿರೋಧಿಸುವುದು ಸಹಜ.ದೇವರನ್ನು ಸ್ಮರಿಸಿ ಸತ್ತಮೇಲೆ ಸಿಗುವ ಸ್ವರ್ಗದ ಆಮಿಷಕ್ಕಿಂತ ಮರ್ತ್ಯದ ಬಾಳನ್ನೇ ಘನತೆಯಿಂದ ಬದುಕುವುದು ಹಕ್ಕು ಎಂದ ಅಂಬೇಡ್ಕರ ಅವರ ಮಹಾನ್ ವಿಚಾರಗಳು ಮಡಿವಂತಿಕೆಯ ಮನುವಾದಿಗಳಿಗೆಹಿಡಿಸುವುದಿಲ್ಲ. ವೈಜ್ಞಾನಿಕ- ವೈಚಾರಿಕ ಯುಗದಲ್ಲಿ ಜೀವಿಸುತ್ತಿರುವ ಇಂದಿನ ಜನಾಂಗಕ್ಕೆ ಇಹದ ಬದುಕು ಮುಖ್ಯವಾಗಬೇಕೇ ಹೊರತು ಸತ್ತಮೇಲೆ ಸಿಗುವ ಕಾಲ್ಪನಿಕಸ್ವರ್ಗಸುಖ ಮುಖ್ಯವಾಗಬಾರದು.ಅಮಿತ್ ಶಾ ಅವರು ಕೇಂದ್ರದ ಗೃಹಮಂತ್ರಿಗಳಾಗಿ ಈ ದೇಶದ ಪ್ರಜೆಗಳೆಲ್ಲರೂ ಭಯಮುಕ್ತರಾಗಿ ಭರವಸೆಯಿಂದ ಬದುಕುವ ಅವಕಾಶವನ್ನು ಕಲ್ಪಿಸಬೇಕಾದ ಸಾಂವಿಧಾನಿಕ ಹೊಣೆ ಉಳ್ಳವರು.
ಸಹಸ್ರಾರು ವರ್ಷಗಳಿಂದ ಮನುವಾದಿಗಳ ಅಮಾನುಷಕೃತ್ಯಗಳಿಂದ ಜೀವಚ್ಛವಗಳಂತೆ ಬದುಕುತ್ತಿದ್ದ ದಲಿತರು,ಶೋಷಿತರು ಅಂಬೇಡ್ಕರ ಅವರು ಸಂವಿಧಾನವನ್ನು ರಚಿಸಿದರು ಎನ್ನುವ ಕಾರಣದಿಂದ ನೆಮ್ಮದಿಯಿಂದ ಬದುಕುತ್ತಿದ್ದಾರೆ,ಗೌರವಯುತ ಜೀವನ ಹಕ್ಕು ಎನ್ನುವ ನಿರೀಕ್ಷೆಯಲ್ಲಿದ್ದಾರೆ.ಡಾ.ಬಿ.ಆರ್.ಅಂಬೇಡ್ಕರ್ ಅವರು ತುಳಿತಕ್ಕೆ ಒಳಗಾದವರೆಲ್ಲರ ಬಾಳುಗಳ ಆಶಾಕಿರಣರಾಗಿದ್ದಾರೆ,ಭರವಸೆಯಾಗಿದ್ದಾರೆ.ತಮ್ಮ ಹಕ್ಕುಗಳ ಪ್ರತಿಷ್ಠಾಪನೆಗಾಗಿ ದಲಿತರು ಅಂಬೇಡ್ಕರ ಅವರಲ್ಲಿ ದೇವರನ್ನು ಕಾಣುತ್ತಿದ್ದಾರೆ.ಅಸ್ಪೃಶ್ಯತೆಯನ್ನು ಪೋಷಿಸಿ ಪೊರೆದ ಧರ್ಮದಾಚೆಗೆ ನಡೆದು ಸಮಾನತೆಯನ್ನು ಪ್ರತಿಪಾದಿಸಿ,ಕೋಟ್ಯಾಂತರ ನೊಂದ ಜೀವರುಗಳ ಬಾಳುಗಳಿಗೆ ಬೆಳಕಾದ ಅಂಬೇಡ್ಕರ ಅವರಲ್ಲಿ ದಲಿತರು ದೇವರನ್ನು ಕಂಡರೆ ಅದರಲ್ಲಿ ತಪ್ಪೇನಿದೆ? ಯಾರು ಬದುಕುವ ಅವಕಾಶ ಕಲ್ಪಿಸಿಕೊಡುತ್ತಾರೋ ಅವರೇ ದೇವರಾಗುತ್ತಾರೆ.ಈ ದೇಶದ ಶೂದ್ರರು,ದಲಿತರು ಮತ್ತು ಶೋಷಿತರುಗಳಿಗೆ ಭಾರತದ ಪ್ರಜೆಗಳಾಗಿ ಎಲ್ಲರಂತೆ ಗೌರವದಿಂದ ಬಾಳುವ ಘನತೆಯ ಜೀವನ ಬೇಕಾಗಿದೆಯೇ ಹೊರತು ಸತ್ತಮೇಲೆ ಸಿಗುವ ಕಾಲ್ಪನಿಕ ಸ್ವರ್ಗದ ಸುಖ ಬೇಡ.ಸ್ವರ್ಗ ನರಕಗಳೇನಿದ್ದರೂ ಮನುವಾದಿಗಳಿಗೇ ಇರಲಿ. ಜನಸಾಮಾನ್ಯರಿಗೆ ಘನತೆಯಿಂದ ಬದುಕುವ ಅವಕಾಶ ಸಿಗಲಿ. ಅಂತಹ ಹಕ್ಕು ಅವಕಾಶವನ್ನು ಅಂಬೇಡ್ಕರ ಅವರು ದೇಶದಲ್ಲಿ ಬಹುಸಂಖ್ಯೆಯಲ್ಲಿರುವ ಶೂದ್ರರು,ದಲಿತರು,ಆದಿವಾಸಿಗಳಿಗೆ ನೀಡಿದ್ದಾರೆ.ಹಾಗಾಗಿ ಅಂಬೇಡ್ಕರ ಎಂದಾಕ್ಷಣ ಶೋಷಿತ ಸಮುದಾಯಗಳವರಲ್ಲಿ ತಮ್ಮ ಬಂಧು,ಹಿತೈಷಿ,ಉದ್ಧಾರಕರ ನೆನಪು ಆಗುತ್ತದೆ.ಅಂಬೇಡ್ಕರ ಎಂದಾಕ್ಷಣ ಅನ್ಯಾಯ- ಅಸಮಾನತೆಗಳ ವಿರುದ್ಧ ಹೋರಾಡುವ ಕೆಚ್ಚು ಉಂಟಾಗುತ್ತದೆ.ಅಂಬೇಡ್ಕರ ಎಂದಾಕ್ಷಣ ಮನುಷ್ಯರೆಲ್ಲರೂಸಮಾನರು ಎನ್ನುವ ಸಮಾನತೆಯಭಾವ ಸ್ಪುರಿಸುತ್ತದೆ.ಅಂಬೇಡ್ಕರ ಎಂದಾಕ್ಷಣ ಪ್ರಗತಿವಿರೋಧಿ ಪ್ರತಿಗಾಮಿ ಶಕ್ತಿಗಳ ವಿರುದ್ಧ ಹೋರಾಡುವ ಮನೋಬಲ ಉಂಟಾಗುತ್ತದೆ.ದಲಿತರು ಅಂಬೇಡ್ಕರ ಅವರ ಹೆಸರಿನಲ್ಲಿ ಸಂಘಟಿತರಾಗುತ್ತಿದ್ದಾರೆ,ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದ್ದಾರೆ. ಈ ಕಾರಣಕ್ಕಾಗಿ ದಲಿತರಾದಿ ಶೋಷಿತ ಸಮುದಾಯಗಳಿಗೆಲ್ಲ ಅಂಬೇಡ್ಕರ ಅವರ ಹೆಸರು ಸ್ಫೂರ್ತಿ ಮತ್ತು ಬಲ.ಶೂದ್ರರು,ದಲಿತರುಗಳಿಗೆ ಅಮಿತ್ ಶಾ ಅವರ ಭ್ರಾಮಕಸ್ವರ್ಗಬೇಡ, ಅಂಬೇಡ್ಕರ ಅವರ ಕನಸಿನ ಸಮಾನಭಾರತ,ಸಮಸಮಾಜವನ್ನುಳ್ಳ ಭಾರತವಷ್ಟೇ ಸಾಕು.
ಸರ್ಕಾರದ ಯೋಜನೆಗಳ ಯಶಸ್ಸಿಗೆ ಪ್ರಾಮಾಣಿಕತೆ ಅತ್ಯವಶ್ಯ. ಮುಸಲ್ಮಾರಿ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ.
ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ. ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.
ಪ.ಜಾತಿ,ಪಂಗಡದ ಅಭಿವೃದ್ಧಿಗೆ ಇಟ್ಟ ಹಣ ದರ್ಬಳಿಕೆ ಖಂಡಿಸಿ ಮಾ.೪ ರಂದು ಬಿಜೆಪಿ ಪ್ರತಿಭಟನೆ